ಗೃಹ ಲಕ್ಷ್ಮೀ ಯೋಜನೆ: ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಶೀಘ್ರವೇ ಬಿಡುಗಡೆ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಗೃಹ ಲಕ್ಷ್ಮೀ ಯೋಜನೆ: ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಶೀಘ್ರವೇ ಬಿಡುಗಡೆ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ, ಸೆಪ್ಟೆಂಬರ್ 10: ರಾಜ್ಯ ಸರ್ಕಾರವು ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿದೆ. ಗೃಹ ಲಕ್ಷ್ಮೀ ಯೋಜನೆಯ ಅಡಿಯಲ್ಲಿ ಕೆಲ ತಿಂಗಳ ಬಾಕಿ ಹಣಕ್ಕಾಗಿ ರಾಜ್ಯದ ಅನೇಕ ಮಹಿಳೆಯರು ಕಾದು ಕುಳಿತಿದ್ದರು. ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇದರ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ಮಂಗಳವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜುಲೈ ಮತ್ತು ಆಗಸ್ಟ್ ತಿಂಗಳ ಬಾಕಿ ಹಣವನ್ನು ಶೀಘ್ರವೇ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದುವರೆಗೆ 21 ಕಂತಿನ ಹಣವನ್ನು ನೀಡಲಾಗಿದೆ. ಒಬ್ಬ ಮಹಿಳೆಗೆ ಒಟ್ಟು ₹42,000 ಹಣವನ್ನು ನೀಡಲಾಗಿದೆ. ಹಣವನ್ನು ಖಾತೆಗೆ ಹಾಕಿದ ಕೂಡಲೇ ಮಹಿಳೆಯರ ಮೊಬೈಲ್‌ಗೆ ಮೆಸೇಜ್ ಹೋಗುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ₹4,500 ಕೋಟಿ ಹಣವನ್ನು ನೇರವಾಗಿ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಜೂನ್ ತಿಂಗಳ ತನಕದ ಹಣವನ್ನು ಪೂರೈಸಲಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ಹಣವನ್ನು ಆದಷ್ಟು ಬೇಗ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಇದಲ್ಲದೆ, ಕರ್ನಾಟಕ ಸರ್ಕಾರ ಆರಂಭಿಸಿರುವ ಪೂರ್ವ ಪ್ರಾಥಮಿಕ ತರಗತಿ ಮಾದರಿಯನ್ನು ಕೇಂದ್ರ ಸರ್ಕಾರವೂ ಅನುಸರಿಸುತ್ತಿದೆ ಎಂದು ಅವರು ಹೇಳಿದರು. ಮಕ್ಕಳ ವಿದ್ಯಾಭ್ಯಾಸ, ಪೌಷ್ಠಿಕಾಂಶ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಬಾಲ್ಯವಿವಾಹ ನಿರ್ಮೂಲನೆ, ಪೋಕ್ಸೋ ಪ್ರಕರಣಗಳು ಹಾಗೂ ವಿಕಲಚೇತನರ ಯೋಜನೆಗಳ ಕುರಿತೂ ಚರ್ಚೆ ನಡೆದಿದೆ.

ಅಂಗನವಾಡಿ ಕೇಂದ್ರಗಳು ಆರಂಭವಾಗಿ ಈ ವರ್ಷ 50 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ, ನವೆಂಬರ್ 19ರಂದು ಬೆಂಗಳೂರಿನಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲು ನಿರ್ಧರಿಸಲಾಗಿದೆ. ಇದೇ ದಿನ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಜನ್ಮದಿನದ ಪ್ರಯುಕ್ತ ಅಂಗನವಾಡಿ ಸುವರ್ಣ ಮಹೋತ್ಸವವನ್ನು ಆಯೋಜಿಸಲಾಗುವುದು. ಜೊತೆಗೆ, “ಅಕ್ಕಾ ಪಡೆ” ಯೋಜನೆಯನ್ನು ಮೈಸೂರು, ಉಡುಪಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಯೋಜಿಸಲಾಗಿದೆ ಎಂದು ತಿಳಿಸಲಾಯಿತು.

ಇತ್ತೀಚೆಗೆ 200 ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ತರಗತಿಗಳು ಪ್ರಾರಂಭಗೊಂಡಿದ್ದು, ಮೊದಲ ಹಂತದಲ್ಲಿ 5,000 ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ನಂತರ ಹಂತ ಹಂತವಾಗಿ ವಿಸ್ತರಿಸಲಾಗುವುದು. ಅಕ್ಕಾ ಪಡೆ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಪೊಲೀಸ್ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲಿದೆ. ಎನ್‌ಸಿಸಿ ವಿದ್ಯಾರ್ಥಿಗಳು ಮತ್ತು ಮಹಿಳಾ ಪೇದೆಗಳು ಜನನಿಬೀಡ ಪ್ರದೇಶಗಳು ಹಾಗೂ ಕಾಲೇಜುಗಳ ಬಳಿ ಸೇವೆ ನೀಡಲಿದ್ದಾರೆ. ಇದಕ್ಕಾಗಿ 109 ಸಹಾಯವಾಣಿ ಆರಂಭಿಸಲಾಗಿದೆ.

ದೇಶದಲ್ಲೇ ಮೊದಲ ಬಾರಿಗೆ ದೇವದಾಸಿ ಸಮೀಕ್ಷೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗಳು ನಡೆಯುತ್ತಿವೆ. ಕಳೆದ ಮುಂಗಾರು ಅಧಿವೇಶನದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ತಿದ್ದುಪಡಿ ಮಾಡಿ ಜಾರಿಗೆ ತರಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ, ತಮ್ಮ ಇಲಾಖೆಗೆ ಹೆಚ್ಚು ಅನುದಾನವನ್ನು ತಂದು ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ. ಇಲಾಖೆಯ ಕಾರ್ಯಗಳಿಗೆ ಕೇಂದ್ರ ಸರ್ಕಾರವೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ ಎಂದರು.

 

Leave a Comment