ನಗರದ ಅನೇಕ ಭಾಗಗಳಲ್ಲಿ ಭಾರಿ ಮಳೆ, ಸಂಚಾರ ಅಸ್ತವ್ಯಸ್ತ
ಬೆಂಗಳೂರು, ಸೆಪ್ಟೆಂಬರ್ 06:
ಭಾನುವಾರದ ಬಿಸಿಲಿನ ನಂತರ ಸಂಜೆ ವೇಳೆ ಅಕಸ್ಮಾತ್ ಸುರಿದ ಭಾರಿ ಮಳೆಯಿಂದ ಬೆಂಗಳೂರಿನ ಹಲವು ಪ್ರದೇಶಗಳು ತಂಪಾದುವು. ಸಂಜೆ 4 ಗಂಟೆಯ ನಂತರ ನಗರದ ಬಹುತೇಕ ಕಡೆಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಸಮುದ್ರ ಮೇಲ್ಮೈಯಲ್ಲಿ ಉಂಟಾದ ಬದಲಾವಣೆಗಳಿಂದ ಮುಂಗಾರು ಮತ್ತೆ ಸಕ್ರಿಯಗೊಂಡಿದ್ದು, ನಗರದಲ್ಲಿ ಜೋರಾಗಿ ಮಳೆ ದಾಖಲಾಗಿದೆ.
ಕಳೆದ ಒಂದು ವಾರದಿಂದ ಪ್ರತಿದಿನ ಸಂಜೆ ಜಿಟಿಜಿಟಿ ಮಳೆ ಆಗುತ್ತಿದ್ದು, ಕೆಲವು ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದೇ ಪ್ರವೃತ್ತಿ ಭಾನುವಾರವೂ ಮುಂದುವರಿಯಿತು. ಬಿಟಿಎಂ, ಕೋರಮಂಗಲ, ಕೆಂಗೇರಿ, ಬೆಳ್ಳಂದೂರು, ಸರ್ಜಾಪುರ ರಸ್ತೆ, ದೊರೆಸಾನಿಪಾಳ್ಯ, ಲಾಲ್‌ಬಾಗ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಹಂಪಿನಗರ, ಮೆಜೆಸ್ಟಿಕ್ ಸುತ್ತಮುತ್ತ, ಹೆಬ್ಬಾಳ, ವಿದ್ಯಾರಣ್ಯಪುರ, ಯಶವಂತಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರಿ ಮಳೆ ದಾಖಲಾಗಿದೆ.
ಆರಂಭದಲ್ಲಿ ಜೋರಾಗಿ ಸುರಿದ ಮಳೆಯು ನಂತರ ಸಣ್ಣ ಪ್ರಮಾಣದಲ್ಲಿ ನಿರಂತರವಾಗಿ ಮುಂದುವರಿಯಿತು. ಮಧ್ಯಾಹ್ನದ ಬಿಸಿಲು ಮಾಯವಾಗಿ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ತಡರಾತ್ರಿ ವರೆಗೂ ಮಳೆಯು ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಾಖಲಾಗಿದ ಮಳೆಯ ಪ್ರಮಾಣ
KSNDMC ಮಾಹಿತಿ ಪ್ರಕಾರ ಸಂಜೆ 5.30ರವರೆಗೆ ನಗರದ ಹಲವು ಪ್ರದೇಶಗಳಲ್ಲಿ ಈ ಕೆಳಗಿನಂತೆ ಮಳೆಯು ದಾಖಲಾಗಿದೆ:
- ಬೊಮ್ಮನಹಳ್ಳಿ: 36 ಮಿ.ಮೀ.
- ರಾಜರಾಜೇಶ್ವರಿ ನಗರ: 35 ಮಿ.ಮೀ.
- ವಿದ್ಯಾಪೀಠ: 34 ಮಿ.ಮೀ.
- ನಾಯಂಡಹಳ್ಳಿ: 31 ಮಿ.ಮೀ.
- ಆರ್‌ಆರ್ ನಗರ 02: 29 ಮಿ.ಮೀ.
- ಹೆಮ್ಮಿಗೆಪುರ: 24 ಮಿ.ಮೀ.
- ಬಿಟಿಎಂ ಲೇಔಟ್: 25.5 ಮಿ.ಮೀ.
- ಬಿಳೆಕಹಳ್ಳಿ: 23.5 ಮಿ.ಮೀ.
- ದೊರೆಸಾನಿಪಾಳ್ಯ: 20 ಮಿ.ಮೀ.
- ಪಟ್ಟಾಭಿರಾಮನಗರ: 18.5 ಮಿ.ಮೀ.
- ಕೋರಮಂಗಲ: 18 ಮಿ.ಮೀ.
- ವಿ.ನಾಗೇನಹಳ್ಳಿ: 15 ಮಿ.ಮೀ.
- ಎಚ್‌ಎಸ್‌ಆರ್ ಬಡಾವಣೆ: 12.5 ಮಿ.ಮೀ.
ಶೇಷಾದ್ರಿಪುರಂ, ರಿಚ್ಮಂಡ್ ವೃತ್ತ, ಡೈರಿ ಸರ್ಕಲ್, ಜಯನಗರ, ಚಾಮರಾಜಪೇಟೆ ಸೇರಿದಂತೆ ಇತರ ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆ ದಾಖಲಾಗಿದೆ.
ಸಂಚಾರ ಅಸ್ತವ್ಯಸ್ತ, ತಗ್ಗು ಪ್ರದೇಶಗಳಲ್ಲಿ ನೀರು ನಿಂತು
ಮಳೆಯ ಕಾರಣದಿಂದಾಗಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿಧಾನಗೊಂಡಿತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನರಿಗೆ ತೊಂದರೆ ಉಂಟಾಯಿತು. ಕೆಲವು ಕಡೆಗಳಲ್ಲಿ ಚಳಿ ಗಾಳಿ ಬೀಸಿದ ಪರಿಣಾಮ ತಂಪಾದ ವಾತಾವರಣ ನಿರ್ಮಾಣವಾಯಿತು.
ಮುಂದಿನ ದಿನಗಳ ಮುನ್ಸೂಚನೆ
ಬೆಂಗಳೂರು ಹವಾಮಾನ ಕೇಂದ್ರದ ಪ್ರಕಾರ, ಸೆಪ್ಟೆಂಬರ್ 12ರವರೆಗೆ ಹಗುರ ಮಳೆ ಹಾಗೂ ಮಧ್ಯ ಮಧ್ಯೆ ಜೋರಾಗಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.